ಕೈರ್ಯಾಂತಸ್

ಬಹು ಸುಂದರವಾದ ವಿವಿಧ ಬಣ್ಣದ ಸುವಾಸನಾಯುಕ್ತವಾದ ಹೂಗಳನ್ನು ಬಿಡುವ ಒಂದು ಸಸ್ಯಜಾತಿ; ಕ್ರೂಸಿಫೆರೀ ಕುಟುಂಬಕ್ಕೆ ಸೇರಿದೆ.  ಇದನ್ನು ಸಾಮಾನ್ಯವಾಗಿ ವಾಲ್ ಫ್ಲವರ್ ಎಂದು ಕರೆಯಲಾಗುತ್ತದೆ.  ಇದು ವರ್ಷಪೂರ್ತಿ ಹೂಗಳನ್ನು ಬಿಡುವುದರಿಂದ ಇದನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಮನೆ ತೋಟಗಳಲ್ಲಿ ಬೆಳೆಸುತ್ತಾರೆ.

ಕೈರ್ಯಾಂತಸ್ ದಕ್ಷಿಣ ಯೂರೊಪಿನ ಮೂಲವಾಸಿ.  ದ್ವೈವಾರ್ಷಿಕ ಇಲ್ಲವೆ ಏಕವಾರ್ಷಿಕ ಸಸ್ಯ.  ಇದು ಸುಮಾರು 1'-1 1/2'  ಎತ್ತರ ಬೆಳೆಯುತ್ತದೆ.  ಇದರ ಎಲೆಗಳು ನೀಳಾಕಾರದವೂ ಊದಾಮಿಶ್ರಿತ ಹಸಿರು ಬಣ್ಣದವೂ ಆಗಿವೆ.  ಅಂಚು ನಯ.  ಹೂಗಳು ಚಿಕ್ಕವು.  ಅವುಗಳ ಬಣ್ಣ ಕಿತ್ತಳೆ, ಕಂದು, ಕೆಂಪು, ಹಳದಿ, ಕೆನ್ನೀಲಿ, ಗುಲಾಬಿ-ಹೀಗೆ ವೈವಿಧ್ಯಪೂರ್ಣ.  ಪುಷ್ಪಪತ್ರದ ಬುಡದಲ್ಲಿ ಒಂದು ರೀತಿಯ ಕೋಶವಿದೆ.  ಹಣ್ಣು ಸ್ವಲ್ಪ ಉದ್ದವಾಗಿದೆ.  ಇದಕ್ಕೆ ನಾಲ್ಕು ಮೂಲೆಗಳಿವೆ.  ಹಣ್ಣಿನ ಒಳಗೆ ಬೀಜಗಳು ಎರಡು ಸಾಲಿನಲ್ಲಿ ಜೋಡಣೆಗೊಂಡಿವೆ.

ಕೈರ್ಯಾಂತಸ್ ಜಾತಿಯಲ್ಲಿ ಕೈರಿ, ಆಲ್ಪಿನಸ್, ಮ್ಯುಟಾಬಿಲಿಸ್, ಮಾರ್ಷಲಿಯೈ, ಅಲಿಯೋನಿಯೈ ಮುಂತಾದ ಹಲವಾರು ಜನಪ್ರಿಯ ಪ್ರಭೇದಗಳಿವೆ.  ಒಂದೊಂದು ಪ್ರಭೇದದಲ್ಲೂ ಅನೇಕ ಬಗೆಗಳಿವೆ.  ಇವುಗಳಲ್ಲಿ ಪರ್ಷಿಯನ್ ವಾಲ್ ಫ್ಲವರ್, ಅರ್ಲಿವಂಡರ್, ಫೈರ್ ಕಿಂಗ್, ಕ್ಲಾತ್ ಆಫ್ ಗೋಲ್ಡ್, ಸ್ಕಾರ್ಲೆಟ್ ಎಂಪರರ್, ವಲ್ಕನ್, ಟಾಮ್ ತಂಬ್, ಪರ್ಪಲ್ ಕ್ವೀನ್, ಹ್ಯಾಮ್ಲೆಟ್ ಮುಂತಾದವು ಮುಖ್ಯವಾದವು.  ಇವಲ್ಲದೆ ಕೈರ್ಯಾಂತಸ್ ಕ್ಯೂಯೆನ್ಸಿಸ್ ಎಂಬ ಅಡ್ಡತಳಿಯೊಂದನ್ನು ಪಡೆಯಲಾಗಿದೆ.  ಇದರ ಹೂ ಮೊಗ್ಗಿನ ಸ್ಥಿತಿಯಲ್ಲಿ ಕಂದುಬಣ್ಣಕ್ಕಿದ್ದು ಅರಳಿದಾಗ ಕಂದುಮಿಶ್ರಿತ ಕಿತ್ತಳೆಗೆ ತಿರುಗಿ ಕೊನೆಗೆ ಊದಾಬಣ್ಣವನ್ನು ತಾಳುತ್ತದೆ.  ಈ ವರ್ಣವೈವಿಧ್ಯದಿಂದಾಗಿ ಕ್ಯೂಯೆನ್ಸಿಸ್ ಅಡ್ಡತಳಿ ಬಹುಜನಪ್ರಿಯವಾಗಿದೆ.

ಕೈರ್ಯಾಂತಸ್ ಗಿಡಗಳನ್ನು ಬೀಜಗಳಿಂದ ಇಲ್ಲವೆ ಕಾಂಡದ ತುಂಡುಗಳಿಂದ ವೃದ್ಧಿ ಮಾಡಬಹುದು.  ತಂಪಾದ ಹವಾಗುಣ ಮತ್ತು ನೀರು ಚೆನ್ನಾಗಿ ಬಸಿದುಹೋಗುವಂಥ ಫಲವತ್ತಾದ ಮಣ್ಣು ಇದರ ಬೇಸಾಯಕ್ಕೆ ಶ್ರೇಷ್ಠ.  ದ್ವೈವಾರ್ಷಿಕ ಬಗೆಗಳು ಮೈದಾನಪ್ರದೇಶಕ್ಕಿಂತ ಗುಡ್ಡಗಾಡುಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ.  ಏಕವಾರ್ಷಿಕ ಬಗೆಗಳಿಗೆ ಮೈದಾನ ಪ್ರದೇಶ ಉತ್ತಮ.  ಮೈದಾನಪ್ರದೇಶಗಳಲ್ಲಿ ಚೆನ್ನಾಗಿ ತಯಾರಿಸಿದ ಮಡಿಗಳಲ್ಲಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿಯೂ ಗುಡ್ಡಗಾಡುಗಳಲ್ಲಿ ಫೆಬ್ರವರಿಯಿಂದ ಮಾರ್ಚ್ ಅಥವಾ ಆಗಸ್ಟ್-ಅಕ್ಟೋಬರ್ ತಿಂಗಳಲ್ಲಿಯೂ ಬೀಜಗಳನ್ನು ಬಿತ್ತಬೇಕು.  ಸಸಿಗಳು 2" ಎತ್ತರ ಬೆಳೆದ ಮೇಲೆ ಬೇಕಾದ ಸ್ಥಳಗಳಲ್ಲಿ 10" ಅಂತರ ಕೊಟ್ಟು ನಾಟಿ ಮಾಡಬೇಕು.  ಕಾಂಡದ ತುಂಡುಗಳಿಂದ ವೃದ್ಧಿ ಮಾಡುವುದಾದರೆ ಸೆಪ್ಟೆಂಬರ್ ತಿಂಗಳು ಸೂಕ್ತವಾದ ಕಾಲ.  ದ್ವೈವಾರ್ಷಿಕ ಬಗೆಗಳು ಬಿತ್ತಿದ 6-8 ತಿಂಗಳ ಅನಂತರವೂ ಏಕವಾರ್ಷಿಕ ಬಗೆಗಳು ಬಿತ್ತಿದ 3-3 1/2  ತಿಂಗಳ ಅನಂತರವೂ ಹೂ ಬಿಡುತ್ತವೆ.
(ಎನ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ